loader
ಔಟ್‍ರೀಚ್ ಹೋಮ್‍ಪೇಜಿಗೆ ಹಿಂದಿರುಗಿ

ಏಕೈಕ ಪರಿಹಾರ
ಕಾವೇರಿಯನ್ನು ಮತ್ತೆ ಹರಿಯುವಂತೆ ಮಾಡುವ ಸರಳ ಮಾರ್ಗವೆಂದರೆ ಮರಗಳನ್ನು ನೆಡುವುದು.

242 ಕೋಟಿ ನೆಡಲು ರೈತರಿಗೆ ಬೆಂಬಲ ನೀಡಿ
ಈ ಅಭಿಯಾನವು ರೈತರಿಗೆ ಅರಣ್ಯಕೃಷಿಯ ಮೂಲಕ 242 ಕೋಟಿ ಮರಗಳನ್ನು ನೆಡಲು ಸಹಾಯ ಮಾಡುತ್ತದೆ, ಇದು ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಮರದ ಹಸಿರು ಹೊದಿಕೆಯಿಂದ ಆವೃತವಾಗುವಂತೆ ಮಾಡುತ್ತದೆ.

ಅರಣ್ಯಕೃಷಿ
ನೀರಿನ ತೀವ್ರತರ ಬಳಕೆ ಮಾಡುವ ಸಾಂಪ್ರದಾಯಿಕ ಬೆಳೆಗಳಿಂದ ದೀರ್ಘಾವಧಿಯ ಅರಣ್ಯಕೃಷಿ ಪದ್ಧತಿಗೆ ಬದಲಾಯಿಸಲು ರೈತರಿಗೆ ಸಹಾಯಧನ ನೀಡುವುದರಿಂದ ಮತ್ತು ಪ್ರೇರೇಪಿಸುವುದರಿಂದ ನಮ್ಮ ವಿಷನ್-ಅನ್ನು ಸಾಧಿಸಲಾಗುವುದು. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹಣ್ಣಿನ ಮರ ಮತ್ತು ವಾಣಿಜ್ಯ ಮರಗಳನ್ನು ಬೆಳೆಸುವುದು ಅಥವಾ ಪೂರ್ಣ ಪ್ರಮಾಣದಲ್ಲಿ ಮರ ಆಧಾರಿತ ಕೃಷಿಯನ್ನು ಅಳವಡಿಸಿಕೊಳ್ಳುವುದೇ ಅರಣ್ಯಕೃಷಿ.

ಹಸಿರು ಹೊದಿಕೆಯನ್ನು ಹೆಚ್ಚಿಸುವ ಲಾಭಗಳು

ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ಹಸಿರು ಹೊದಿಕೆಯಡಿಯಲಿ ತರುವುದು ಮೂರು ರೀತಿಯ ಲಾಭಕ್ಕೆ ಕಾರಣವಾಗುತ್ತದೆ:

  • ಮಣ್ಣಿನಲ್ಲಿ ಸಾವಯವ ಅಂಶವನ್ನು ಮರು ತುಂಬಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ.
  • ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅಂದಾಜು 40% ಹೆಚ್ಚಿಸುವ ಮೂಲಕ ನದಿ ಮತ್ತು ಅಂತರ್ಜಲ ಮಟ್ಟವನ್ನು ಪುನರೂರ್ಜಿತಗೊಳ್ಳುತ್ತದೆ.
  • 5-7 ವರ್ಷಗಳಲ್ಲಿ ರೈತರ ಆದಾಯವನ್ನು 3-8 ಪಟ್ಟು ಹೆಚ್ಚಾಗುವುದೆಂದು ಸಾಬೀತಾಗಿರುವ ಅರಣ್ಯಕೃಷಿಯ ಮೂಲಕ ರೈತರ ಆದಾಯವನ್ನು ಹೆಚ್ಚುತ್ತದೆ.

ಮರಗಳು ಮಣ್ಣನ್ನು ಹೇಗೆ ಪುನಶ್ಚೇತನಗೊಳಿಸುತ್ತವೆ?

ಪ್ರತಿ ವರ್ಷ ಭಾರತ ಸುಮಾರು 530 ಕೋಟಿ ಟನ್ ಮಣ್ಣನ್ನು ಕಳೆದುಕೊಳ್ಳುತ್ತಿದೆ! ಆದರೆ ಮರದ ಹೊದಿಕೆಯಡಿಯಲ್ಲಿ, ಮರಗಳು ಚೆಲ್ಲುವ ಮತ್ತು ನೆಲಕ್ಕೆ ಬೀಳುವ ಎಲೆಗಳು ಮತ್ತು ಕೊಂಬೆಗಳ ತ್ಯಾಜ್ಯವು ಮಣ್ಣನ್ನು ಸಂರಕ್ಷಿಸುತ್ತದೆ. ಭೂಮಿಯ ಮೇಲೆ ತ್ಯಾಜ್ಯ ಮತ್ತು ಹಸಿರು ಹೊದಿಕೆ ಇಲ್ಲದಿದ್ದರೆ, ನೀರು ಸರಾಗವಾಗಿ ಹರಿದು, ಮಣ್ಣಿನ ಸವೆತಕ್ಕೆ ಕಾರಣವಾಗಬಹುದು.

ಮರಗಳ ತೋಪಿನ ರಚನೆಯಲ್ಲಿ, ಮರಗಳ ನಡುವಿನ ಅಂತರದಲ್ಲಿ ಮತ್ತು ನೆಲದ ಹೊದಿಕೆಯಲ್ಲಿ, ಒಂದು ಕೃಷಿ ವ್ಯವಸ್ಥೆಯು ಎಷ್ಟು ನಿಕಟವಾಗಿ ನೈಸರ್ಗಿಕ ಅರಣ್ಯವನ್ನು ಹೋಲುತ್ತದೆಯೋ, ಭೂಸವೆತ ಉಂಟಾಗುವ ಸಾಧ್ಯತೆಯು ಅಷ್ಟೇ ಕಡಿಮೆಯಾಗುತ್ತದೆಯೆಂದು ಅಧ್ಯಯನಗಳು ತೋರಿಸಿವೆ.

ಮರಗಳು ನದಿಗಳನ್ನು ಹೇಗೆ ಪುನರುಜ್ಜೀವನಗೊಳಿಸುತ್ತವೆ

ಮರಗಳ ಜೀವಂತ ಹಾಗೂ ಕೊಳೆಯುತ್ತಿರುವ ಬೇರುಗಳು ಮಣ್ಣಿನಲ್ಲಿ ಸುಸಂಘಟಿತ, ಅತೀ ಚಿಕ್ಕದಾದ ಕಾಲುವೆಗಳ ಜಾಲವನ್ನು ರಚಿಸುವ ಮೂಲಕ ಮಣ್ಣನ್ನು ಸಚ್ಛಿದ್ರವನ್ನಾಗಿಸುತ್ತದೆ. ನೀರನ್ನು ಹೀರಿಕೊಂಡ ನಂತರ, ಮಳೆನೀರು ಮಣ್ಣಿನಲ್ಲಿ ನಿಧಾನವಾಗಿ ಕೆಳಕ್ಕಿಳಿಯುವಂತೆ ಮಾಡಿ, ಅದು ಅಡ್ಡಲಾಗಿಯೂ ವ್ಯಾಪಿಸುವಂತೆ ಮಾಡುತ್ತದೆ. ಈ ರೀತಿಯ ನೆಲದಡಿಯ “ನೀರಿನ ಹರಿವು” ಹೊಳೆಗಳಿಗೆ ಮತ್ತು ನದಿಗಳಗೆ ನೀರು ಹರಿಯುವಂತೆ ಮಾಡುತ್ತದೆ. ಈ ರೀತಿ, ಮಳೆಗಾಲ ಮುಗಿದ ನಂತರವೂ ನದಿ ಹರಿವು ನಿರಂತರವಾಗಿರುವಂತೆ ನೋಡಿಕೊಳ್ಳುತ್ತದೆ.

ಮರಗಳು ರೈತರ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ?

  • ಅರಣ್ಯಕೃಷಿ ಪದ್ಧತಿಗಳು ಭಾರತದಾದ್ಯಂತ ರೈತರ ಆದಾಯದಲ್ಲಿ ಹೆಚ್ಚಳವನ್ನು ತೋರಿಸಿವೆ.
  • ಈಶ 69,760 ರೈತರನ್ನು ಅರಣ್ಯಕೃಷಿಗೆ ಬದಲಿಸಿದ್ದು, 5-7 ವರ್ಷಗಳಲ್ಲಿ ರೈತರ ಆದಾಯವನ್ನು 3-8 ಪಟ್ಟು ಹೆಚ್ಚಾಗಿಸಿದೆ.
  • ವಿವಿಧ ರೀತಿಯ ಮರಗಳನ್ನು ನೆಡುವುದರಿಂದ ಅಮೂಲ್ಯವಾದ ಇಂಧನ ಕಟ್ಟಿಗೆ, ಮೇವು, ಗೊಬ್ಬರ ಮತ್ತು ಔಷಧಿ ಸಿಗುತ್ತದೆ. ಮರದ ಮಾರಾಟವು ಆಪತ್ಕಾಲದಲ್ಲಿ ರೈತರಿಗೆ ಸಹಾಯ ಮಾಡಬಹುದು.
  • ಮರಗಳು ಕೃಷಿಭೂಮಿಯ ಉತ್ಪಾದಕತೆಯನ್ನು ಸುಧಾರಿಸುತ್ತದೆ ಮತ್ತು ಸುಸ್ಥಿರಗೊಳಿಸುತ್ತದೆ; ಕೀಟದ ಹಾವಳಿಯನ್ನು ಕಡಿಮೆ ಮಾಡುತ್ತವೆ, ಭೂಸವೆತವನ್ನು ತಡೆಯುತ್ತವೆ ಮತ್ತು ಬೆಳೆ ವೈಫಲ್ಯವನ್ನು ಕಡಿಮೆ ಮಾಡುತ್ತವೆ - ಈ ಸಮಸ್ಯೆಗಳೆಲ್ಲವೂ ಏಕತಳಿ ಕೃಷಿ ಪದ್ಧತಿಗಳಲ್ಲಿ ಸರ್ವೇಸಾಮಾನ್ಯವಾದ ಸಮಸ್ಯೆಗಳು.

ನದಿ ಪುನರುಜ್ಜೀವನಕ್ಕಾಗಿನ ಗೇಮ್-ಚೇಂಜರ್

ಕಾವೇರಿ ಕೂಗು ಅಭಿಯಾನವು ಜಲಾನಯನ ಪ್ರದೇಶದಲ್ಲಿ ದೃಢ ಸಂಕಲ್ಪದ ಕಾರ್ಯಾಚರಣೆಗೆ ಬದ್ಧವಾಗಿದೆ. ಕಾವೇರಿ ಪ್ರದೇಶದಲ್ಲಿ ನಡೆಯುವ ಕೆಲಸವು 83,000 ಚದರ ಕಿ.ಮೀ ವಿಸ್ತೀರ್ಣದ ದೊಡ್ಡ ನದಿ ಜಲಾನಯನ ಪ್ರದೇಶದಲ್ಲಿ ಅನುಷ್ಠಾನಕ್ಕೆ ತರಲಾದ ಯೋಜನೆಯ ಉದಾಹರಣೆಯನ್ನು ಒದಗಿಸುತ್ತದೆ.

ಭಾರತದ ಉಳಿದ ಭಾಗಗಳು ಮತ್ತು ವಿಶ್ವದ ಉಷ್ಣವಲಯದ ಪ್ರದೇಶಗಳು ಅನುಸರಿಸಬಹುದಾದ ಸುಸ್ಥಿರ ನದಿ ಪುನರುಜ್ಜೀವನ ಪ್ರಕ್ರಿಯೆಗೆ ಇದೊಂದು ನಿದರ್ಶನವಾಗುತ್ತದೆ.

ಕಾವೇರಿ ಕೂಗು ಅಭಿಯಾನವು ಪರಿಸರ ಸಂರಕ್ಷಣೆ ಮತ್ತು ಆರ್ಥಿಕತೆ ನೀತಿಗಳು ಹೇಗೆ ಕೈಜೋಡಿಸಿ ಮುನ್ನಡೆಯಬಹುದು ಮತ್ತು ಪರಿಸರವನ್ನು ಪುನರುಜ್ಜೀವನಗೊಳಿಸುವುದು ಬಹಳ ಲಾಭದಾಯಕ ಪ್ರಕ್ರಿಯೆ ಎಂಬುದನ್ನು ತೋರಿಸುತ್ತದೆ.

ಒಮ್ಮೆ ಇದನ್ನು ಪ್ರದರ್ಶಿಸಿದ ನಂತರ, ಪ್ರತಿಯೊಬ್ಬರೂ ಈ ಪದ್ಧತಿಯನ್ನು ಕೈಗೆತ್ತಿಕೊಳ್ಳುವುದು ಸ್ವಾಭಾವಿಕವಾಗುತ್ತದೆ.